ಬಿಕ್ಕೆಗಿಡ
ರೂಬಿಯೇಸೀ ಕುಟುಂಬಕ್ಕೆ ಸೇರಿದ ಕಾಡುಮರ. ದಿಕಾಮಲಿ, ಕಂಬಿಮೇಣ ಪರ್ಯಾಯ ನಾಮಗಳು. ಗಾರ್ಡೀನಿಂiÀi ಗಮ್ಮಿಫೆರ ಸಸ್ಯಶಾಸ್ತ್ರೀಯ ಹೆಸರು. ಇದು ಸಾಮಾನ್ಯವಾಗಿ ಹೆಚ್ಚು ಎತ್ತರ ಬೆಳೆಯುವುದಿಲ್ಲ. ಹೆಚ್ಚೆಂದರೆ 3 ಮೀ ಎತ್ತರ ಬೆಳೆದೀತು. ಅಲ್ಲದೆ ವಕ್ರವಕ್ರವಾಗಿ ಬೆಳೆಯುತ್ತದೆ. ಆದರೂ ಚೆಲುವಾಗಿ ಕಾಣುವ ರೆಂಬೆಗಳು, ದಟ್ಟಹಸುರು, ಎಲೆಗಳು, ಹಳದಿ ಬಣ್ಣದ ಸುವಾಸನಾಯುಕ್ತ ಹೂಗಳು-ಇವುಗಳಿಂದ ಕೂಡಿ ಆಕರ್ಷಕವಾಗಿ ಕಾಣುತ್ತದೆ. 

ಎಲೆಗಳು ಮತ್ತು ಎಳೆಕಾಂಡಗಳು ಹಸಿರು ಮಿಶ್ರಿತ ಹಳದಿ ಬಣ್ಣದ, ಪಾರದರ್ಶಕವಾದ, ಭಾರವಾದ ಹಾಗೂ ವಿಚಿತ್ರವಾಸನೆಯಿಂದ ಕೂಡಿದ ರಾಳವನ್ನು (ರೆಸಿನ್) ಸ್ರವಿಸುತ್ತವೆ. ಈ ಅಂಟಿಗೆ ದಿಕಾಮಲಿ ಅಥವಾ ಕಂಬಿಮೇಣ ಎಂಬ ಹೆಸರುಂಟು. ಇದನ್ನು ಆಲ್ಕೋಹಾಲಿನಲ್ಲಿ ಕರಗಿಸಿದರೆ ಗಾರ್ಡೆನಿನ್ ಹೆಸರಿನ ಬಣ್ಣದ ರಾಸಾಯನಿಕ ದೊರೆಯುತ್ತದೆ. ದಿಕಾಮಲಿಯನ್ನು ಸೆಳುವುನಿವಾರಕ ಕಫಹಾರಿ, ಜೀರ್ಣಕಾರಿ, ಜಂತುನಾಶಕವಾಗಿ ಬಳಸುವುದಿದೆ. ಮಕ್ಕಳಿಗೆ ಹಲ್ಲು ಬರುವಾಗ ಉಂಟಾಗುವ ಭೇದಿಯನ್ನು ನಿವಾರಿಸಲು, ವಸಡಿನ ಉರಿ ನಿವಾರಿಸಲು ನರಸಂಬಂಧ ವ್ಯತ್ಯಾಸಗಳನ್ನು ಸರಿಪಡಿಸಲು ಉಪಯೋಗಿಸುವುದುಂಟು. ಅಜೀರ್ಣದಿಂದ ಉಂಟಾಗುವ ಹೊಟ್ಟೆಯುಬ್ಬರ ಹಾಗೂ ಜ್ವರಗಳ ಚಿಕಿತ್ಸೆಗೂ ಇದು ಉಪಯುಕ್ತ. ಇದರ ಲೇಪ ಒಳ್ಳೆಯ ಕ್ರಿಮಿನಾಶಕ. ದನಕರುಗಳ ಗಾಯ, ವ್ರಣಗಳಿಗೆ ನೊಣಕೀಟಾದಿಗಳು ಮುಸುರದಂತೆ ತಡೆಯಲೂ ಇದನ್ನು ಉಪಯೋಗಿಸುವುದಿದೆ. 

ಬಿಕ್ಕೆಗಿಡದ ಚೌಬೀನೆ ತುಂಬ ನಯವಾದ್ದು, ಹೊಳಪುಳ್ಳದ್ದು, ಇದು ಗಡುಸಾಗಿ ತೂಕ ಉಳ್ಳದ್ದಾಗಿವೆಯಲ್ಲದೆ ನೇರ ಕಣಗಳನ್ನೂ ಚೆಲುವಾದ ಗೆರೆಗಳನ್ನೂ ಪಡೆದಿದೆ. ಸಾಧಾರಣ ಬಾಳಿಕೆ ಇರುವ ಇದಕ್ಕೆ ಒಳ್ಳೆಯ ಮೆರುಗು ಬರುವಂತೆ ಮಾಡಬಹುದು. ಇದರಿಂದಾಗಿ ಚೌಬೀನೆಯನ್ನು ಬಾಚಣಿಗೆ, ಉಪಕರಣಗಳ ಹಿಡಿ, ರೂಲುದೊಣ್ಣೆ, ಲೇಖನಿಪಿಡಿಗಳು ಮುಂತಾದವುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.
(ವೈ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ